ಶುಂಠಿ
	ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಜಂಜಿಬರ್ ಅಫಿಸಿನಾಲಿಸ್ ಎಂಬ ಪ್ರಭೇದದ ಸಸ್ಯ. ಭಾರತದ ಅನೇಕ ಕಡೆಗಳಲ್ಲಿ, ವಿಶೇಷವಾಗಿ ತಮಿಳುನಾಡು, ಕೇರಳ ಮತ್ತು ಕೊಡಗಿನ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಇದರ ಬೇಸಾಯ ಮಾಡುತ್ತಾರೆ. ಹಿತೋಷ್ಣ ತಂಪು ಹವಾಮಾನವಿರುವ ಸ್ಥಳ ಶುಂಠಿ ಕೃಷಿಗೆ ಯೋಗ್ಯವಾದುದು. ಮೊಳಕೆಗಳಿರುವ ಬೇರು ಕಾಂಡ ಅಥವಾ ರೈಜೋಮ್‍ಗಳನ್ನು ಮೆದುಮಣ್ಣಿನ ನೆಲದಲ್ಲಿ ನಾಟಿಮಾಡಿ ಇದರ ಗಿಡಗಳನ್ನು ಬೆಳೆಸುತ್ತಾರೆ. ಚಿಗುರೊಡೆದು ಪೂರ್ತಿ ಬೆಳೆದ ಸಸ್ಯದ ಮೇಲ್ಭಾಗದಲ್ಲಿ ಅಗಲವಾದ ದೊಡ್ಡ ಎಲೆಗಳು ಬೇರುಕಾಂಡದಿಂದ ಚಿಗುರಿ ನೆಲದ ಮೇಲ್ಭಾಗಕ್ಕೆ ಬರುತ್ತವೆ. ವಾರ್ಷಿಕ ಸಸ್ಯವಾದ ಶುಂಠಿ ಉತ್ತಮ ಸಂಬಾರ ವಸ್ತು. ಇದರ ಬೇರುಕಾಂಡವೇ ಉಪಯೋಗ ಭಾಗ, ಹಸಿಶುಂಠಿ ಮತ್ತು ಒಣಶುಂಠಿ ಎಂಬ ಎರಡು ಬಗೆಗಳಿವೆ.

	ಶುಂಠಿಯಲ್ಲಿ ಸುಗಂಧ ಬೀರುವ ಜಿಂಜರಾಲ್ ಎಂಬ ಹಳದಿ ಬಣ್ಣದ ಎಣ್ಣೆ ಇದೆ. ಅದರಲ್ಲಿ ಕಾಂಫೀನೆ, ಫೆಲ್ಲಾಂಡ್ರಮ್, ಜಿಂಜಿಬೆನೈನ್, ಸೈನಿಯಾಲ್, ಬೊರ್ನಿಯಾಲ್ ಎಂಬ ಘಟಕಗಳಿವೆ. ವಿವಿಧ ರೆಸಿನ್‍ಗಳು, ಪಿಷ್ಟಪದಾರ್ಥ, ಪೊಟಾಸಿಯಮ್ ಆಕ್ಸಲೇಟ್ ಮತ್ತು ಕೆಲವು ಆವಶ್ಯಕ ತೈಲಗಳೂ ಇರುವುವು.						
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ